Wednesday, 11 April 2018

ಬಾಡಿಗೆ ಸೈಕಲ್


**ಬಾಡಿಗೆ ಸೈಕಲ್**


ಕರೀಮನ ಅಂಗಡಿಯಿಂದ
ಐದು ರೂಪಾಯಿಗೆ
ತಂದ ಬಾಡಿಗೆ ಸೈಕಲ್ಲು
ಕುಂಟುತ್ತಾ ಕುಂಟುತ್ತಾ
ಓಡಿಸಿ ಬೀಳಿಸಿ
ಕಲಿತಿದ್ದೆ ಒಕ್ಕಲು,
ಸುಮ್ ಸುಮ್ಮನೆ ಹಾಕಿ ಬೆಲ್ಲು
ಅದೇನೋ ಖುಷಿಯ ಗುಲ್ಲು
ಗ್ರೌಂಡು ತುಂಬಾ ಓಡಿ
ಓಡಿಸಿದರೂ
ಗಮನಿಸಲಿಲ್ಲ ಹೊಟ್ಟೆಯ
ಹಸಿವು...
ಸಣ್ಣ ಸಣ್ಣ ಕಲ್ಲುಗಳ ಮೇಲೆ
ಹಾರಿ ಜಿಗಿದು ನಡೆದರೂ
ಚುಚ್ಚಿದ್ದು ನೆನಪಿಸಲಿಲ್ಲ
ಬರಿಯ ಕಾಲುಗಳು..
ಸೀಟಿನ ಮೇಲೆ ಕೂತು
ಓಡಿಸುವ ತವಕ
ಆದರೂ
ಹಂತ ಹಂತವಾಗಿ
ಕಲಿಯುವ ಪುಳಕ..
ಗ್ರೌಂಡಿನ ಎಲ್ಲೆಡೆ ಗಾಲಿಯ
ಗೆರೆಗಳು ಬರೆಗಳು..
ಕೈ ಕಾಲು ಕೆತ್ತದರೂ
ಬಾಡಿಗೆ ಮುಗಿದೀತು
ಅದರೊಳಗೆ ಪೆಡಲ್ ತುಳಿತ..
ಕಲಿತು ಬಿಟ್ಟೆ ಅಲ್ಪ ಸ್ವಲ್ಪ
ಆದರೂ ಅದೆಷ್ಟು ಖುಷಿ
ಈಗ ಹಣ ಎಷ್ಟೋ
ಮರೆಯಾಗಿಲ್ಲ ಕರೀಮನ
ಬಾಡಿಗೆ ಸೈಕಲ್ ನ ಪಸೆ..||

✍ ವೆಂಕಟೇಶ ಚಾಗಿ
ಲಿಂಗಸುಗೂರ

No comments:

Post a Comment

Comments here