**ಕಟ್ಟಲಾಗಿದೆ ಮನೆಯ** (ಕವನ) ಕಟ್ಟಲಾಗಿದೆ ಮನೆಯ ಮನೆ ಮನೆಗಳ ಮೇಲೆ ಬೀಸುವ ಗಾಳಿಯ ತಡೆದು ಆಗಸ ಮುಟ್ಟುವ ತನಕ ಮೋಡಗಳು ದಿಕ್ಕೆಡುವ ಹಾಗೆ ಕಟ್ಟಲಾಗಿದೆ ಮನೆಯ..|| ಕಟ್ಟಲಾಗಿದೆ ಮನೆಯ ಫಲವತ್ತಾದ ಭೂಮಿಯ ಮೇಲೆ ಚಿಗುರೊಡೆಯುವ ಬೀಜಗಳ ಮಣ್ಣು ಮಾಡಿ, ನೆಲದ ಮೇಲೆಲ್ಲ ಕಾಂಕ್ರೀಟ್ ಹಾಸಿಗೆಯ ಹಾಸಿ ಕಟ್ಟಲಾಗಿದೆ ಮನೆಯ..|| ಕಟ್ಟಲಾಗಿದೆ ಮನೆಯ ತಂಪು ನೆರಳನು ಬಿಸಿ ಮಾಡಿ ಗಿಡಮರಗಳ ಮಾರಣ ಹೋಮ ಮಾಡಿ, ಕೆರೆ ನದಿಗಳ ಹೊತ್ತಿ ಉರಿಸಿ ಕಟ್ಟಲಾಗಿದೆ ಮನೆಯ..|| ಕಟ್ಟಲಾಗಿದೆ ಮನೆಯ ನಿರ್ಮಲ ಸಾಗರದ ಮೇಲೆ ಜಲಚರಗಳ ಜಗವ ಮುಚ್ಚಿ, ಬೆಟ್ಟಗುಡ್ಡಗಳ ಸಮಗೊಳಿಸಿ ಹೆಸರೇ ಇಲ್ಲದಂತೆ ಮಾಡಿ ಕಟ್ಟಲಾಗಿದೆ ಮನೆಯ..|| ಕಟ್ಟಲಾಗಿದೆ ಮನೆಯ ಕಾನನದ ಮೃತ ದೇಹದ ಮೇಲೆ ರವಿಯ ಬೆಂಕಿ ಉಂಡೆಗಳ ನೆಲದ ಮೇಲೆ ಚೆಲ್ಲಿ, ಹುಲಿ ಸಿಂಹ ಕರಡಿಗಳ ಓಡಿಸಿ ಮಾನವೀಯತೆಯ ಮರೆತು ಕಟ್ಟಲಾಗಿದೆ ಮನೆಯ..|| ✍ವೆಂಕಟೇಶ ಚಾಗಿ ಲಿಂಗಸುಗೂರ Venkatesh.chagi1@gmail.com